ಶುಕ್ರವಾರ, ಜುಲೈ 31, 2026

ಕರ್ನಾಟಕದಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿವೆಯೇ? – ಸಂಪೂರ್ಣ ಮಾಹಿತಿ

 

ಕರ್ನಾಟಕದಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿವೆಯೇ? – ಸಂಪೂರ್ಣ ಮಾಹಿತಿ :


ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ "ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ" ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದರಿಂದ ಅನೇಕ ಜನರಲ್ಲಿ ಆತಂಕವೂ ಮೂಡಿದೆ. ಆದರೆ ನಿಜವಾದ ಪರಿಸ್ಥಿತಿ ಏನು? ಎಷ್ಟು ಮತದಾರರ ಹೆಸರುಗಳು ಪರಿಶೀಲನೆಯಲ್ಲಿವೆ? ಯಾರ ಹೆಸರುಗಳನ್ನು ತೆಗೆದುಹಾಕಬಹುದು? ಇದಕ್ಕೆ ಚುನಾವಣಾ ಆಯೋಗ ನೀಡಿರುವ ಸ್ಪಷ್ಟನೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.

ಮತದಾರರ ಪಟ್ಟಿ ಪರಿಷ್ಕರಣೆ ಎಂದರೇನು?

ಭಾರತದ ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತದೆ. ಇದನ್ನು Electoral Roll Revision ಎಂದು ಕರೆಯಲಾಗುತ್ತದೆ. ಇದರ ಮುಖ್ಯ ಉದ್ದೇಶ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು. ಈ ಪ್ರಕ್ರಿಯೆಯಲ್ಲಿ ಮೃತಪಟ್ಟವರು, ಬೇರೆ ಊರಿಗೆ ಅಥವಾ ರಾಜ್ಯಕ್ಕೆ ಶಾಶ್ವತವಾಗಿ ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಬಾರಿ ಹೆಸರು ನೋಂದಾಯಿಸಿಕೊಂಡವರು ಹಾಗೂ ಇತರ ಅನರ್ಹ ದಾಖಲೆಗಳನ್ನು ಗುರುತಿಸಿ ಪರಿಶೀಲಿಸಲಾಗುತ್ತದೆ.

ಈ ಪ್ರಕ್ರಿಯೆಯ ಮೂಲಕ ನಿಜವಾದ ಅರ್ಹ ಮತದಾರರಿಗೆ ಮತದಾನದ ಹಕ್ಕು ಸರಿಯಾಗಿ ಲಭ್ಯವಾಗುವಂತೆ ಮಾಡುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ.

Special Intensive Revision (SIR) ಎಂದರೇನು?

ಈ ಬಾರಿ ಕರ್ನಾಟಕದಲ್ಲಿ ಚುನಾವಣಾ ಆಯೋಗವು Special Intensive Revision (SIR) ಎಂಬ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ. ಸಾಮಾನ್ಯ ವಾರ್ಷಿಕ ಪರಿಷ್ಕರಣೆಯಿಗಿಂತ ಇದು ಹೆಚ್ಚು ಸಮಗ್ರ ಪರಿಶೀಲನೆಯಾಗಿದೆ.

ಈ ಸಂದರ್ಭದಲ್ಲಿ Booth Level Officer (BLO)ಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಅಗತ್ಯವಿದ್ದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿಯನ್ನು ನವೀಕರಿಸಲಾಗುತ್ತಿದೆ.

ಎಷ್ಟು ಮತದಾರರ ಹೆಸರುಗಳು ಪರಿಶೀಲನೆಯಲ್ಲಿವೆ?

ಇತ್ತೀಚಿನ ವರದಿಗಳ ಪ್ರಕಾರ ಸುಮಾರು 68.28 ಲಕ್ಷ ಮತದಾರರನ್ನು ವಿವಿಧ ಕಾರಣಗಳಿಂದ ಪರಿಶೀಲನೆಗಾಗಿ ಗುರುತಿಸಲಾಗಿದೆ. ಇವರಲ್ಲಿ ಪ್ರಮುಖವಾಗಿ ಕೆಳಗಿನ ವರ್ಗಗಳು ಸೇರಿವೆ:

  • ಮೃತಪಟ್ಟಿರುವವರು
  • ಶಾಶ್ವತವಾಗಿ ಸ್ಥಳಾಂತರಗೊಂಡವರು
  • ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡವರು
  • ತಪ್ಪಾದ ಅಥವಾ ಅಪೂರ್ಣ ದಾಖಲೆ ಹೊಂದಿರುವವರು
  • ಇತರೆ ಅನುಮಾನಾಸ್ಪದ ದಾಖಲೆಗಳು.
  • ಕೆಲವು ವರದಿಗಳ ಪ್ರಕಾರ ಈ ಸಂಖ್ಯೆ ಅಂತಿಮ ಪರಿಶೀಲನೆಯ ವೇಳೆಗೆ ಸುಮಾರು 80 ರಿಂದ 84 ಲಕ್ಷ ಪ್ರಕರಣಗಳವರೆಗೆ ತಲುಪುವ ಸಾಧ್ಯತೆ ಇದೆ. ಆದರೆ ಇದರ ಅರ್ಥ ಎಲ್ಲರ ಹೆಸರನ್ನೂ ತೆಗೆದುಹಾಕಲಾಗಿದೆ ಎಂಬುದಲ್ಲ.

ಹೆಸರುಗಳನ್ನು ನೇರವಾಗಿ ತೆಗೆದುಹಾಕಲಾಗುತ್ತದೆಯೇ?

ಇಲ್ಲ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಯಾವುದೇ ಮತದಾರರ ಹೆಸರನ್ನು ಪರಿಶೀಲನೆ ಇಲ್ಲದೆ ಅಥವಾ ಮಾಹಿತಿ ನೀಡದೆ ನೇರವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ.

ಹೆಸರು ತೆಗೆದುಹಾಕುವ ಮೊದಲು ಸಂಬಂಧಿತ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಯಾವ ಕಾರಣಗಳಿಂದ ಹೆಸರು ತೆಗೆದುಹಾಕಬಹುದು?

ಮತದಾರರ ಹೆಸರು ತೆಗೆದುಹಾಕಲು ಸಾಮಾನ್ಯವಾಗಿ ಈ ಕಾರಣಗಳು ಇರಬಹುದು:


  • ಮತದಾರರು ಮೃತಪಟ್ಟಿರುವುದು
  • ಬೇರೆ ಕ್ಷೇತ್ರಕ್ಕೆ ಶಾಶ್ವತವಾಗಿ ಸ್ಥಳಾಂತರವಾಗಿರುವುದು
  • ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಾಯಿಸಿರುವುದು
  • ತಪ್ಪು ಮಾಹಿತಿ ನೀಡಿ ನೋಂದಾಯಿಸಿರುವುದು
  • ಕಾನೂನಿನ ಪ್ರಕಾರ ಅನರ್ಹರಾಗಿರುವುದು.


ಈ ಕಾರಣಗಳಿಲ್ಲದಿದ್ದರೆ ಸಾಮಾನ್ಯವಾಗಿ ಮತದಾರರ ಹೆಸರನ್ನು ತೆಗೆದುಹಾಕಲಾಗುವುದಿಲ್ಲ.

ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಹೇಗೆ ಪರಿಶೀಲಿಸಬಹುದು?

ಪ್ರತಿಯೊಬ್ಬ ಮತದಾರರು ತಮ್ಮ ಹೆಸರನ್ನು ನಿಯಮಿತವಾಗಿ ಪರಿಶೀಲಿಸುವುದು ಉತ್ತಮ.

ಪರಿಶೀಲಿಸುವ ವಿಧಾನಗಳು:

  • ಚುನಾವಣಾ ಆಯೋಗದ ಅಧಿಕೃತ ಮತದಾರರ ಪೋರ್ಟಲ್‌ನಲ್ಲಿ ಹುಡುಕಬಹುದು.
  • Voter Helpline ಮೊಬೈಲ್ ಆ್ಯಪ್ ಬಳಸಬಹುದು.
  • Booth Level Officer (BLO) ಅವರನ್ನು ಸಂಪರ್ಕಿಸಬಹುದು.
  • ತಾಲೂಕು ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.

ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಕಾಣಿಸದಿದ್ದರೆ ಆತಂಕಪಡುವ ಅಗತ್ಯವಿಲ್ಲ.

ನೀವು:

  • ಹೊಸ ಅರ್ಜಿ ಸಲ್ಲಿಸಬಹುದು.
  • ಹೆಸರು ತಿದ್ದುಪಡಿ ಮಾಡಿಸಬಹುದು.
  • ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು.
  • BLO ಮೂಲಕ ಮಾಹಿತಿ ಪರಿಶೀಲಿಸಬಹುದು.

ನಿಮ್ಮ ಅರ್ಜಿ ಪರಿಶೀಲನೆಯಾದ ನಂತರ ಅರ್ಹರಾಗಿದ್ದರೆ ಹೆಸರು ಮತ್ತೆ ಸೇರಿಸಲಾಗುತ್ತದೆ.

ರಾಜಕೀಯ ಚರ್ಚೆಗೆ ಕಾರಣವೇನು?

ಈ ಪರಿಷ್ಕರಣೆ ಪ್ರಕ್ರಿಯೆ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಲಕ್ಷಾಂತರ ಮತದಾರರ ಹೆಸರುಗಳು ಪರಿಶೀಲನೆಯಲ್ಲಿರುವುದರಿಂದ ಆತಂಕ ವ್ಯಕ್ತಪಡಿಸಿವೆ. ಆದರೆ ಚುನಾವಣಾ ಆಯೋಗ ಮಾತ್ರ ಇದು ಸಂಪೂರ್ಣವಾಗಿ ಆಡಳಿತಾತ್ಮಕ ಹಾಗೂ ನಿಯಮಿತ ಪರಿಷ್ಕರಣೆ ಪ್ರಕ್ರಿಯೆಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಮತದಾರರು ಮಾಡಬೇಕಾದುದು

ಪ್ರತಿಯೊಬ್ಬ ಮತದಾರರೂ ತಮ್ಮ ಮತದಾನದ ಹಕ್ಕನ್ನು ಸುರಕ್ಷಿತವಾಗಿರಿಸಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕು.

  • ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಪರಿಶೀಲಿಸಿ.
  • ವಿಳಾಸ ಬದಲಾಗಿದ್ದರೆ ತಕ್ಷಣ ಮಾಹಿತಿ ನವೀಕರಿಸಿ.
  • EPIC (Voter ID) ವಿವರಗಳನ್ನು ಸರಿಯಾಗಿಟ್ಟುಕೊಳ್ಳಿ.
  • BLO ಭೇಟಿ ನೀಡಿದರೆ ಅಗತ್ಯ ಸಹಕಾರ ನೀಡಿ.
  • ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ.

ಹರಿದಾಡುತ್ತಿರುವ ವದಂತಿಗಳ ಬಗ್ಗೆ ಎಚ್ಚರ

ಸಾಮಾಜಿಕ ಜಾಲತಾಣಗಳಲ್ಲಿ "ಲಕ್ಷಾಂತರ ಮತದಾರರ ಹೆಸರುಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ" ಎಂಬ ಸಂದೇಶಗಳು ಹರಿದಾಡುತ್ತಿವೆ. ಆದರೆ ಪರಿಶೀಲನೆಯಲ್ಲಿರುವ ಪ್ರಕರಣಗಳ ಸಂಖ್ಯೆ ಮತ್ತು ಅಂತಿಮವಾಗಿ ತೆಗೆದುಹಾಕಲಾದ ಹೆಸರುಗಳ ಸಂಖ್ಯೆ ಒಂದೇ ಅಲ್ಲ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರವೇ ನಿಖರ ಸಂಖ್ಯೆಗಳು ಲಭ್ಯವಾಗುತ್ತವೆ.

ಮತದಾರರ ಪಟ್ಟಿ ಪರಿಷ್ಕರಣೆ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಅತ್ಯಂತ ಪ್ರಮುಖ ಪ್ರಕ್ರಿಯೆಯಾಗಿದೆ. ಇದರ ಉದ್ದೇಶ ಯಾರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಅಲ್ಲ; ಬದಲಾಗಿ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು. ಪ್ರಸ್ತುತ ಕರ್ನಾಟಕದಲ್ಲಿ ಲಕ್ಷಾಂತರ ದಾಖಲೆಗಳು ಪರಿಶೀಲನೆಯಲ್ಲಿದ್ದರೂ, ಅಂತಿಮವಾಗಿ ಎಷ್ಟು ಹೆಸರುಗಳನ್ನು ತೆಗೆದುಹಾಕಲಾಗುತ್ತದೆ ಎಂಬುದು ಪರಿಶೀಲನೆ ಪೂರ್ಣಗೊಂಡ ನಂತರ ಮಾತ್ರ ತಿಳಿಯಲಿದೆ.

ಆದ್ದರಿಂದ ವದಂತಿಗಳನ್ನು ನಂಬುವ ಬದಲು ಚುನಾವಣಾ ಆಯೋಗದ ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸಿ, ಅಗತ್ಯವಿದ್ದರೆ ತಿದ್ದುಪಡಿ ಅಥವಾ ಹೊಸ ನೋಂದಣಿ ಮಾಡಿಸಿಕೊಳ್ಳಿ. ಜಾಗೃತ ಮತದಾರರೇ ಬಲಿಷ್ಠ ಪ್ರಜಾಪ್ರಭುತ್ವದ ಆಧಾರ.

ಗುರುವಾರ, ಜುಲೈ 30, 2026

ಕಲ್ಹಣನ ರಾಜತರಂಗಿಣಿ: ಭಾರತದ ಮೊದಲ ವೈಜ್ಞಾನಿಕ ಇತಿಹಾಸ ಗ್ರಂಥ


ಕಲ್ಹಣನ ರಾಜತರಂಗಿಣಿ ಎಂದರೇನು? 8 ತರಂಗಗಳು, 7826 ಶ್ಲೋಕಗಳು, ಮಹತ್ವ, ಮಿತಿಗಳು, ಅನುವಾದ,.


  ಪರಿಚಯ :

800 ವರ್ಷದ ಇತಿಹಾಸವನ್ನು ಒಂದೇ ಪುಸ್ತಕದಲ್ಲಿ, ಒಂದೂ ಸುಳ್ಳಿಲ್ಲದೆ, ರಾಜರ ಹೊಗಳಿಕೆ ಮಾತ್ರವಲ್ಲ ಅವರ ತಪ್ಪುಗಳನ್ನೂ ಬರೆದಿಟ್ಟ ಒಬ್ಬ ಭಾರತೀಯ ಇತಿಹಾಸಕಾರ ಯಾರು ಗೊತ್ತಾ? ಭಾರತದ ಮೊದಲ ವೈಜ್ಞಾನಿಕ ಇತಿಹಾಸ ಗ್ರಂಥ ಯಾವುದು? ಅದು ಕಲ್ಹಣ ಬರೆದ *ರಾಜತರಂಗಿಣಿ*. 


*1. ಕಲ್ಹಣ ಯಾರು?*

ಕಲ್ಹಣ ಕ್ರಿ.ಶ. 12ನೇ ಶತಮಾನದಲ್ಲಿ ಬದುಕಿದ್ದ ಕಾಶ್ಮೀರದ ಇತಿಹಾಸಕಾರ ಮತ್ತು ಸಂಸ್ಕೃತ ಕವಿ. ಇವನ ತಂದೆ ಚಂಪಕ ಕಾಶ್ಮೀರದ ರಾಜ ಹರ್ಷನ ಮಂತ್ರಿಯಾಗಿದ್ದ. ಅಂದರೆ ಕಲ್ಹಣ ರಾಜಕೀಯ ಕುಟುಂಬದಿಂದ ಬಂದವನು. ಆಸ್ಥಾನದ ಒಳ-ಹೊರಗು ಎಲ್ಲಾ ಗೊತ್ತಿದ್ದವನು.


ಕಲ್ಹಣ ಕ್ರಿ.ಶ. 1148 ರಿಂದ 1150 ರ ಅವಧಿಯಲ್ಲಿ ರಾಜತರಂಗಿಣಿ ಗ್ರಂಥವನ್ನು ಬರೆದ. ಲೋಹಾರ ವಂಶದ ರಾಜ ಜಯಸಿಂಹನ ಕಾಲದಲ್ಲಿ ಕಾಶ್ಮೀರದಲ್ಲಿ ವಾಸವಾಗಿದ್ದ. ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾನೆ. ಇವನಿಗೆ ಕಾಶ್ಮೀರದ ಭೂಗೋಳ, ರಾಜಕೀಯ, ಸಮಾಜ ಎಲ್ಲದರ ಬಗ್ಗೆಯೂ ಆಳವಾದ ಜ್ಞಾನ ಇತ್ತು.


*2. ರಾಜತರಂಗಿಣಿ ಎಂದರೇನು?*

"ರಾಜತರಂಗಿಣಿ" ಅಂದರೆ "ರಾಜರ ನದಿ" ಅಂತ ಅರ್ಥ. ಇದು ಕಾಶ್ಮೀರದ ಇತಿಹಾಸವನ್ನು ಹೇಳುವ ಕಾವ್ಯರೂಪದ ಗ್ರಂಥ. ಒಟ್ಟು 8 ತರಂಗಗಳು, ಅಂದರೆ 8 ಅಧ್ಯಾಯಗಳು ಇವೆ. 7826 ಶ್ಲೋಕಗಳಿವೆ.


ಇದು ಸಾಮಾನ್ಯ ಹೊಗಳಿಕೆಯ ಕಾವ್ಯ ಅಲ್ಲ. ಕಲ್ಹಣ ಸುಮಾರು 800 ವರ್ಷದ ಇತಿಹಾಸವನ್ನು ದಾಖಲಿಸಿದ್ದಾನೆ. ಪೌರಾಣಿಕ ರಾಜ ಗೋನಂದನಿಂದ ಶುರು ಮಾಡಿ ತನ್ನ ಕಾಲದ ರಾಜ ಜಯಸಿಂಹನ ವರೆಗೆ ಎಲ್ಲಾ ರಾಜರ ಕಥೆ ಇದೆ. 


*ವಿಶೇಷತೆ ಏನು?

ಕಲ್ಹಣ ಸುಮ್ನೆ ಕೇಳಿದ್ದನ್ನು ಬರೆಯಲಿಲ್ಲ. ಅವನು 11 ಹಿಂದಿನ ಇತಿಹಾಸ ಗ್ರಂಥಗಳನ್ನು, ಶಾಸನಗಳನ್ನು, ನಾಣ್ಯಗಳನ್ನು, ದೇವಾಲಯಗಳ ದಾಖಲೆಗಳನ್ನು ಓದಿ, ಖುದ್ದಾಗಿ ಸ್ಥಳಗಳಿಗೆ ಹೋಗಿ ಪರಿಶೀಲಿಸಿ ಆಮೇಲೆ ಬರೆದಿದ್ದಾನೆ. ಇದೇ ಕಾರಣಕ್ಕೆ ರಾಜತರಂಗಿಣಿಯನ್ನು ಭಾರತದ ಮೊದಲ ವೈಜ್ಞಾನಿಕ ಇತಿಹಾಸ ಗ್ರಂಥ ಅಂತ ಕರೆಯುತ್ತಾರೆ.


*3. ರಾಜತರಂಗಿಣಿಯಲ್ಲಿನ ಪ್ರಮುಖ ವಿಷಯಗಳು*

ಕಲ್ಹಣ ಕೇವಲ ರಾಜರ ಯುದ್ಧಗಳ ಬಗ್ಗೆ ಮಾತ್ರ ಬರೆಯಲಿಲ್ಲ. ಸಮಗ್ರ ಸಮಾಜದ ಚಿತ್ರಣ ಕೊಟ್ಟಿದ್ದಾನೆ.


*ರಾಜಕೀಯ ಇತಿಹಾಸ :

 ಕರ್ಕೋಟ, ಉತ್ಪಲ, ಲೋಹಾರ ವಂಶದ ರಾಜರ ಆಳ್ವಿಕೆ. ಲಲಿತಾದಿತ್ಯ ಮುಕ್ತಾಪೀಡ ಅನ್ನೋ ರಾಜ ಇಡೀ ಉತ್ತರ ಭಾರತ ಗೆದ್ದಿದ್ದ. ಅವಂತಿವರ್ಮನ್ ನೀರಾವರಿ ಕಾಲುವೆಗಳನ್ನು ಕಟ್ಟಿಸಿದ. 


*ಸಾಮಾಜಿಕ ಸ್ಥಿತಿ :

ಜಾತಿ ಪದ್ಧತಿ, ವಿವಾಹ ಪದ್ಧತಿ, ಸ್ತ್ರೀಯರ ಸ್ಥಾನ, ಸತಿ ಪದ್ಧತಿ ಬಗ್ಗೆ ಬರೆದಿದ್ದಾನೆ. ರಾಣಿ ದಿದ್ದಾ ಅನ್ನೋ ಮಹಿಳೆ ಕಾಶ್ಮೀರ ಆಳಿದ್ದಳು.


*ಆರ್ಥಿಕ ಸ್ಥಿತಿ : 

ಕೃಷಿ, ವ್ಯಾಪಾರ, ತೆರಿಗೆ ವ್ಯವಸ್ಥೆ, ಕೇಸರಿ ಬೆಳೆ ಬಗ್ಗೆ ಮಾಹಿತಿ ಇದೆ.


*ಪ್ರಾಕೃತಿಕ ವಿಕೋಪ : 

ಭೂಕಂಪ, ಪ್ರವಾಹ, ಬರಗಾಲ, ಸಾಂಕ್ರಾಮಿಕ ರೋಗಗಳು ಬಂದಾಗ ಜನರ ಸ್ಥಿತಿ ಹೇಗಿತ್ತು ಅಂತ ದಾಖಲಿಸಿದ್ದಾನೆ. ಇದು ತುಂಬಾ ಅಪರೂಪ.


*ಧಾರ್ಮಿಕ ಸ್ಥಿತಿ :

ಬೌದ್ಧ, ಶೈವ, ವೈಷ್ಣವ ಧರ್ಮಗಳ ಬೆಳವಣಿಗೆ, ದೇವಾಲಯಗಳ ನಿರ್ಮಾಣ ಬಗ್ಗೆ ಇದೆ.


ಕಲ್ಹಣ ರಾಜರನ್ನು ಕುರುಡಾಗಿ ಹೊಗಳಿಲ್ಲ. ಒಳ್ಳೆಯ ರಾಜರನ್ನು ಹೊಗಳಿದ್ದಾನೆ, ಕೆಟ್ಟ ರಾಜರನ್ನು, ದಬ್ಬಾಳಿಕೆ ಮಾಡಿದ ರಾಜರನ್ನು ಕಟುವಾಗಿ ಟೀಕಿಸಿದ್ದಾನೆ. ಇತಿಹಾಸಕಾರ ನಿಷ್ಪಕ್ಷಪಾತಿ ಆಗಿರಬೇಕು ಅನ್ನೋ ತತ್ವವನ್ನು ಅವನು 900 ವರ್ಷಗಳ ಹಿಂದೆಯೇ ಪಾಲಿಸಿದ್ದಾನೆ.


*4. ರಾಜತರಂಗಿಣಿಯ ಮಹತ್ವ*

ರಾಜತರಂಗಿಣಿ ಯಾಕೆ ಇಷ್ಟೊಂದು ಮುಖ್ಯ?


1. ಮೊದಲ ವೈಜ್ಞಾನಿಕ ಇತಿಹಾಸ. 

 ಭಾರತದಲ್ಲಿ ಚರಿತ್ರೆ ಬರೆಯುವ ಕ್ರಮವನ್ನು ಕಲ್ಹಣ ಶುರು ಮಾಡಿದ. ಮೂಲ ಆಧಾರಗಳನ್ನು ಪರಿಶೀಲಿಸಿ ಬರೆಯಬೇಕು ಅಂತ ತೋರಿಸಿಕೊಟ್ಟ.

2. ಕಾಶ್ಮೀರದ ಇತಿಹಾಸ.

 ರಾಜತರಂಗಿಣಿ ಇಲ್ಲದಿದ್ದರೆ ಕಾಶ್ಮೀರದ 800 ವರ್ಷದ ಇತಿಹಾಸ ನಮಗೆ ಗೊತ್ತೇ ಆಗುತ್ತಿರಲಿಲ್ಲ. ಇದು ಒಂದೇ ಒಂದು ಅಧಿಕೃತ ಮೂಲ.

3. ಭಾರತೀಯ ಇತಿಹಾಸಶಾಸ್ತ್ರಕ್ಕೆ ಕೊಡುಗೆ .

ವಿದೇಶಿ ಯಾತ್ರಿಕರ ಬರಹಗಳನ್ನು ನಾವು ನಂಬುವ ಹಾಗೆ, ನಮ್ಮವರೇ ಬರೆದ ಅಧಿಕೃತ ಇತಿಹಾಸ ಇದು.

4. KPSC ಮಹತ್ವ.

 ಪ್ರಿಲಿಮ್ಸ್‌ನಲ್ಲಿ "ರಾಜತರಂಗಿಣಿ ಕರ್ತೃ ಯಾರು, ಯಾವ ಪ್ರದೇಶದ ಇತಿಹಾಸ, ಎಷ್ಟು ತರಂಗಗಳು" ಡೈರೆಕ್ಟ್ ಪ್ರಶ್ನೆ ಬರುತ್ತೆ. ಮೇನ್ಸ್‌ನಲ್ಲಿ "ಕಲ್ಹಣನನ್ನು ಭಾರತದ ಮೊದಲ ಇತಿಹಾಸಕಾರ ಎನ್ನಲು ಕಾರಣಗಳು" 10 ಮಾರ್ಕ್ಸ್ ಪ್ರಶ್ನೆ ಬರುತ್ತೆ.


5. ಕಲ್ಹಣನ ನಂತರದ ರಾಜತರಂಗಿಣಿಗಳು.

ಕಲ್ಹಣನ ಕೆಲಸ ಅಲ್ಲಿಗೆ ಮುಗಿಯಲಿಲ್ಲ. ಅವನ ನಂತರ 4 ಜನ ಇತಿಹಾಸಕಾರರು ಅವನ ಕೃತಿಯನ್ನು ಮುಂದುವರಿಸಿದರು. ಇವರನ್ನು "ಕಲ್ಹಣನ ಪರಂಪರೆ" ಅಂತ ಕರೆಯುತ್ತಾರೆ.

1. *ಜೋನರಾಜ* - ಕ್ರಿ.ಶ. 1459 ರವರೆಗೆ

2. *ಶ್ರೀವಾರ* - ಕ್ರಿ.ಶ. 1486 ರವರೆಗೆ  

3. *ಪ್ರಜ್ಞಾಭಟ್ಟ* - ಕ್ರಿ.ಶ. 1513 ರವರೆಗೆ

4. *ಶುಕ* - ಕ್ರಿ.ಶ. 1586 ರವರೆಗೆ


6. ರಾಜತರಂಗಿಣಿಯ ಅನುವಾದ ಮತ್ತು ವಿಶ್ವ ಪ್ರಸಿದ್ಧಿ.

ಹೊರಗಿನವರಿಗೆ ಕಲ್ಹಣ ಗೊತ್ತಾಗಿದ್ದು 19ನೇ ಶತಮಾನದಲ್ಲಿ. 1900 ರಲ್ಲಿ ಬ್ರಿಟಿಷ್ ವಿದ್ವಾಂಸ *Aurel Stein* ಮೊದಲ ಬಾರಿಗೆ ಸಂಪೂರ್ಣ ಇಂಗ್ಲಿಷ್ ಅನುವಾದ ಮಾಡಿದ. ನಂತರ R.S. Pandit ಕನ್ನಡ ಮತ್ತು ಇಂಗ್ಲಿಷ್ ಗೆ ಅನುವಾದಿಸಿದರು. ಇದಾದಮೇಲೆ ರಾಜತರಂಗಿಣಿ ಜಾಗತಿಕ ಮಟ್ಟದಲ್ಲಿ "ಭಾರತದ ಹೆರೊಡೋಟಸ್" ಎಂದು ಪ್ರಸಿದ್ಧವಾಯಿತು.


7. ಕಲ್ಹಣನ ನಿಷ್ಪಕ್ಷಪಾತತೆಯ ತತ್ವ.

ಕಲ್ಹಣ ಸ್ವತಃ ಹೇಳುತ್ತಾನೆ: 

"ಶ್ಲಾಘ್ಯಃ ಸ ಏವ ಗುಣವಾನ್ ರಾಗದ್ವೇಷಬಹಿಷ್ಕೃತಃ | ಭೂತಾರ್ಥಕಥನೇ ಯಸ್ಯ ಸ್ಥೈರ್ಯಂ ಹಿಮವದಚಲಮ್ ||"  

ಅರ್ಥ: ರಾಗ-ದ್ವೇಷ ಬಿಟ್ಟು, ಹಿಮಾಲಯದಂತೆ ದೃಢವಾಗಿ ಸತ್ಯವನ್ನು ಹೇಳುವವನೇ ನಿಜವಾದ ಗುಣವಂತ ಇತಿಹಾಸಕಾರ. ಇದೇ ಕಾರಣಕ್ಕೆ ಅವನು ಒಳ್ಳೆಯ ರಾಜರನ್ನು ಹೊಗಳಿದ ಹಾಗೆ, ಕೆಟ್ಟ ರಾಜರನ್ನು ಬಿಟ್ಟುಬಿಡಲಿಲ್ಲ.


8. ರಾಜತರಂಗಿಣಿಯ ಮಿತಿಗಳು.

ಕಲ್ಹಣ ಶ್ರೇಷ್ಠನಾದರೂ ಕೆಲವು ಮಿತಿಗಳಿವೆ. 

1. ಅವನು ಪೌರಾಣಿಕ ಕಥೆಗಳನ್ನೂ ಇತಿಹಾಸ ಅಂತ ಬರೆದಿದ್ದಾನೆ. ಗೋನಂದ, ಯುಧಿಷ್ಠಿರ ಇವರ ಕಾಲ ನಿರ್ಧಾರದಲ್ಲಿ ತಪ್ಪಾಗಿದೆ.

2. ಕೇವಲ ರಾಜರ ಕಥೆ ಹೇಳಿದ್ದಾನೆ. ಸಾಮಾನ್ಯ ಜನರ ಜೀವನದ ಬಗ್ಗೆ ಕಡಿಮೆ ಮಾಹಿತಿ ಇದೆ.

3. ಕಾಶ್ಮೀರ ಬಿಟ್ಟು ಉಳಿದ ಭಾರತದ ಬಗ್ಗೆ ತುಂಬಾ ಕಡಿಮೆ ಬರೆದಿದ್ದಾನೆ.

ಆದರೂ ಅವನ ಕಾಲಕ್ಕೆ, ಅವನ ಬಳಿ ಇದ್ದ ಮೂಲಗಳ ಪ್ರಕಾರ, ಇದು ಅದ್ಭುತ ಕೆಲಸ.


ಸ್ನೇಹಿತರೇ, ಕಲ್ಹಣನ ರಾಜತರಂಗಿಣಿ ಕೇವಲ ಕಾಶ್ಮೀರದ ಇತಿಹಾಸ ಅಲ್ಲ. ಅದು ಭಾರತೀಯ ಇತಿಹಾಸ ಬರವಣಿಗೆಗೆ ಹಾಕಿದ ಭದ್ರ ಬುನಾದಿ. ಇತಿಹಾಸವನ್ನು ವೈಜ್ಞಾನಿಕವಾಗಿ, ನಿಷ್ಪಕ್ಷಪಾತವಾಗಿ ಬರೆಯಬೇಕು ಅಂತ ಜಗತ್ತಿಗೆ ತೋರಿಸಿಕೊಟ್ಟ ಮೊದಲ ಭಾರತೀಯ ಕಲ್ಹಣ.


QUICK REVISION TABLE

ವಿಷಯ ಮಾಹಿತಿ

**ಕರ್ತೃ** ಕಲ್ಹಣ

**ಕಾಲ** ಕ್ರಿ.ಶ. 1148 - 1150

**ಭಾಷೆ** ಸಂಸ್ಕೃತ

**ತರಂಗಗಳು** 8

**ಶ್ಲೋಕಗಳು** 7826

**ವಿಷಯ** ಕಾಶ್ಮೀರದ ಇತಿಹಾಸ

**ಪ್ರಮುಖ ರಾಜರು.** ಲಲಿತಾದಿತ್ಯ, ಅವಂತಿವರ್ಮನ್, ರಾಣಿ ದಿದ್ದಾ

ಮಂಗಳವಾರ, ಜುಲೈ 28, 2026

ಇತಿಹಾಸ ಎಂದರೇನು? | ಇತಿಹಾಸದ ಅರ್ಥ ಮತ್ತು ಮಹತ್ವ

 ಇತಿಹಾಸ ಎಂದರೇನು? | ಇತಿಹಾಸದ ಅರ್ಥ ಮತ್ತು ಮಹತ್ವ:


ಪರಿಚಯ

ನಾವು ಇಂದು ವಾಸಿಸುತ್ತಿರುವ ಜಗತ್ತು ಸಾವಿರಾರು ವರ್ಷಗಳ ಮಾನವ ಪ್ರಯತ್ನ, ಅನುಭವ ಮತ್ತು ಬೆಳವಣಿಗೆಯ ಫಲವಾಗಿದೆ. ಆದರೆ ಒಂದು ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡಬಹುದು. ಸಾವಿರಾರು ವರ್ಷಗಳ ಹಿಂದೆ ಜನರು ಹೇಗೆ ಬದುಕುತ್ತಿದ್ದರು? ಅವರು ಯಾವ ರೀತಿಯ ಸಮಾಜವನ್ನು ನಿರ್ಮಿಸಿದ್ದರು? ರಾಜ್ಯಗಳು, ಧರ್ಮಗಳು, ಸಂಸ್ಕೃತಿಗಳು ಮತ್ತು ನಾಗರಿಕತೆಗಳು ಹೇಗೆ ರೂಪುಗೊಂಡವು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಅಧ್ಯಯನವೇ ಇತಿಹಾಸ.


UPSC, KAS, PSI, SDA ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸವು ಅತ್ಯಂತ ಪ್ರಮುಖ ವಿಷಯವಾಗಿದೆ. ಏಕೆಂದರೆ ಇತಿಹಾಸವು ಕೇವಲ ಭೂತಕಾಲದ ಘಟನೆಗಳ ಸಂಗ್ರಹವಲ್ಲ; ಅದು ಮಾನವ ನಾಗರಿಕತೆಯ ಬೆಳವಣಿಗೆಯ ಕಥೆಯಾಗಿದೆ.


ಇತಿಹಾಸ ಎಂದರೇನು?

ಇತಿಹಾಸ ಎಂದರೆ ಮಾನವ ಸಮಾಜದ ಭೂತಕಾಲದ ಘಟನೆಗಳು, ಸಾಧನೆಗಳು, ರಾಜಕೀಯ ಬೆಳವಣಿಗೆಗಳು, ಸಾಮಾಜಿಕ ಬದಲಾವಣೆಗಳು ಮತ್ತು ಸಾಂಸ್ಕೃತಿಕ ವಿಕಾಸಗಳ ಅಧ್ಯಯನ. ಇಂಗ್ಲಿಷ್‌ನ "History" ಎಂಬ ಪದವು ಗ್ರೀಕ್ ಭಾಷೆಯ "Historia" ಎಂಬ ಪದದಿಂದ ಬಂದಿದೆ. "Historia" ಎಂದರೆ ಶೋಧನೆ, ತನಿಖೆ ಅಥವಾ ಮಾಹಿತಿ ಸಂಗ್ರಹಣೆ ಎಂಬ ಅರ್ಥವನ್ನು ನೀಡುತ್ತದೆ.


ಕನ್ನಡದಲ್ಲಿ "ಇತಿಹಾಸ" ಎಂಬ ಪದವು ಸಂಸ್ಕೃತ ಮೂಲದಿಂದ ಬಂದಿದೆ. "ಇತಿ" ಎಂದರೆ ಹೀಗೆ ಮತ್ತು "ಹಾಸ" ಎಂದರೆ ಸಂಭವಿಸಿತು ಎಂಬ ಅರ್ಥವನ್ನು ಹೊಂದಿದೆ. ಆದ್ದರಿಂದ "ಹೀಗೆ ನಡೆದಿತ್ತು" ಎಂದು ತಿಳಿಸುವುದೇ ಇತಿಹಾಸ. ಸರಳವಾಗಿ ಹೇಳುವುದಾದರೆ, ಮಾನವ ಜೀವನದ ಭೂತಕಾಲದ ದಾಖಲೆಯೇ ಇತಿಹಾಸ.


ಇತಿಹಾಸದ ಮಹತ್ವ:

ಇತಿಹಾಸವು ಕೇವಲ ಹಳೆಯ ರಾಜರು ಮತ್ತು ಯುದ್ಧಗಳ ಅಧ್ಯಯನವಲ್ಲ. ಇದು ಸಮಾಜ ಹೇಗೆ ರೂಪುಗೊಂಡಿತು, ಆಡಳಿತ ವ್ಯವಸ್ಥೆಗಳು ಹೇಗೆ ಬೆಳೆಯಿತು, ಧರ್ಮ ಮತ್ತು ಸಂಸ್ಕೃತಿ ಹೇಗೆ ಬದಲಾಯಿತು ಎಂಬುದನ್ನು ತಿಳಿಸುತ್ತದೆ. ಇತಿಹಾಸದ ಅಧ್ಯಯನದಿಂದ ಭೂತಕಾಲದ ತಪ್ಪುಗಳಿಂದ ಪಾಠ ಕಲಿಯಬಹುದು, ಸಮಾಜದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಬಹುದು, ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿಯನ್ನು ಬೆಳೆಸಬಹುದು ಹಾಗೂ ನಾಗರಿಕತೆಯ ವಿಕಾಸವನ್ನು ತಿಳಿದುಕೊಳ್ಳಬಹುದು. ಜೊತೆಗೆ ಭವಿಷ್ಯದ ನಿರ್ಧಾರಗಳಿಗೆ ಮಾರ್ಗದರ್ಶನ ಪಡೆಯಲು ಸಹ ಇತಿಹಾಸ ನೆರವಾಗುತ್ತದೆ. ಈ ಕಾರಣದಿಂದಲೇ ಇತಿಹಾಸವನ್ನು ಸಮಾಜದ ಕನ್ನಡಿ ಎಂದು ಕರೆಯಲಾಗುತ್ತದೆ.


ಇತಿಹಾಸದ ಪಿತಾಮಹ – ಹೆರೊಡೋಟಸ್.

ಇತಿಹಾಸದ ಅಧ್ಯಯನವನ್ನು ವೈಜ್ಞಾನಿಕವಾಗಿ ಆರಂಭಿಸಿದ ವ್ಯಕ್ತಿ ಹೆರೊಡೋಟಸ್. ಇವರನ್ನು "ಇತಿಹಾಸದ ಪಿತಾಮಹ" ಎಂದು ಕರೆಯುತ್ತಾರೆ. ಹೆರೊಡೋಟಸ್ ಗ್ರೀಕ್ ದೇಶದವನಾಗಿದ್ದು ಕ್ರಿ.ಪೂ. 484 ರಿಂದ 424ರ ಅವಧಿಯಲ್ಲಿ ಬದುಕಿದ್ದನು. ಅವನ ಪ್ರಮುಖ ಕೃತಿ "Historia". ಗ್ರೀಕರು ಮತ್ತು ಪರ್ಷಿಯನ್ನರ ನಡುವಿನ ಯುದ್ಧಗಳ ಬಗ್ಗೆ ವಿವರವಾದ ಮಾಹಿತಿಯನ್ನು ಅವನು ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. ಮಾನವ ಘಟನೆಗಳನ್ನು ಕ್ರಮಬದ್ಧವಾಗಿ ದಾಖಲಿಸಿದ ಮೊದಲ ಇತಿಹಾಸಕಾರನೆಂಬ ಹೆಗ್ಗಳಿಕೆ ಹೆರೊಡೋಟಸ್‌ಗೆ ಸಲ್ಲುತ್ತದೆ.


ಭಾರತದ ಇತಿಹಾಸದ ಪಿತಾಮಹ – ಕಲ್ಹಣ.

ಭಾರತದ ಇತಿಹಾಸ ಅಧ್ಯಯನದಲ್ಲಿ ಕಲ್ಹಣನ ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಇವರನ್ನು "ಭಾರತದ ಇತಿಹಾಸದ ಪಿತಾಮಹ" ಎಂದು ಕರೆಯುತ್ತಾರೆ. ಅವರು ಕ್ರಿ.ಶ. 12ನೇ ಶತಮಾನದಲ್ಲಿ ಬದುಕಿದ್ದರು. ಅವರ ಪ್ರಸಿದ್ಧ ಕೃತಿ "ರಾಜತರಂಗಿಣಿ". ಈ ಕೃತಿ ಸಂಸ್ಕೃತ ಭಾಷೆಯಲ್ಲಿ ರಚನೆಯಾಗಿದ್ದು ಕಾಶ್ಮೀರದ ರಾಜರ ಇತಿಹಾಸವನ್ನು ವಿವರಿಸುತ್ತದೆ. ಭಾರತೀಯ ಇತಿಹಾಸವನ್ನು ವ್ಯವಸ್ಥಿತವಾಗಿ ದಾಖಲಿಸಲು ನಡೆದ ಮೊದಲ ಪ್ರಯತ್ನಗಳಲ್ಲಿ ರಾಜತರಂಗಿಣಿ ಪ್ರಮುಖವಾಗಿದೆ.


ಪ್ರಮುಖ ಇತಿಹಾಸಕಾರರು ಮತ್ತು ಅವರ ಅಭಿಪ್ರಾಯಗಳು:

ಸಂತ ಆಗಸ್ಟಿನ್ ಇತಿಹಾಸವನ್ನು ಧರ್ಮ ಮತ್ತು ನೈತಿಕತೆಯ ದೃಷ್ಟಿಯಿಂದ ವಿಶ್ಲೇಷಿಸಿದರು. ಅವರ ಪ್ರಮುಖ ಕೃತಿಗಳೆಂದರೆ "The City of God" ಮತ್ತು "Confessions". ಅವರ ಪ್ರಕಾರ ಇತಿಹಾಸವು ದೇವರು ಮತ್ತು ಮಾನವ ಸಮಾಜದ ನಡುವಿನ ಸಂಬಂಧದ ಕಥೆಯಾಗಿದೆ.


ಅರಿಸ್ಟಾಟಲ್ ಗ್ರೀಕ್ ತತ್ವಜ್ಞಾನಿಯಾಗಿದ್ದರು. ಅವರ ಪ್ರಮುಖ ಕೃತಿ "Politics". ಅವರ ಅಭಿಪ್ರಾಯದ ಪ್ರಕಾರ ಇತಿಹಾಸವು ಸಮಾಜದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.


ಕಾರ್ಲ್ ಮಾರ್ಕ್ಸ್ ಇತಿಹಾಸವನ್ನು ಆರ್ಥಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದರು. ಅವರ ಪ್ರಮುಖ ಕೃತಿಗಳೆಂದರೆ "Das Kapital" ಮತ್ತು "Communist Manifesto". ಮಾರ್ಕ್ಸ್ ಪ್ರಕಾರ ಮಾನವ ಇತಿಹಾಸವು ವರ್ಗಸಂಘರ್ಷಗಳ ಇತಿಹಾಸವಾಗಿದೆ. ಸಮಾಜದ ಆರ್ಥಿಕ ವ್ಯವಸ್ಥೆಯೇ ಇತಿಹಾಸದ ಬೆಳವಣಿಗೆಯನ್ನು ನಿರ್ಧರಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.


ಆರ್ಣಾಲ್ಡ್ ಟಾಯ್ನ್ಬೀ ಅವರ ಪ್ರಮುಖ ಕೃತಿ "A Study of History". ಅವರ ಪ್ರಕಾರ ನಾಗರಿಕತೆಗಳ ಉದಯ ಮತ್ತು ಪತನವೇ ಇತಿಹಾಸದ ಕೇಂದ್ರ ವಿಷಯವಾಗಿದೆ.


ಜಿ. ಬಿ. ಬರಿ ಅವರ ಪ್ರಮುಖ ಕೃತಿಗಳೆಂದರೆ "A History of Greece" ಮತ್ತು "History of the Later Roman Empire". ಅವರ ಪ್ರಕಾರ ಇತಿಹಾಸವು ಒಂದು ವಿಜ್ಞಾನವಾಗಿದೆ. ಇತಿಹಾಸ ಅಧ್ಯಯನದಲ್ಲಿ ಸಾಕ್ಷ್ಯಗಳು ಮತ್ತು ದಾಖಲೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅವರು ಹೇಳಿದರು.


ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ಕೂಡ ಇತಿಹಾಸಕಾರರಾಗಿದ್ದರು. ಅವರ ಪ್ರಮುಖ ಕೃತಿಗಳೆಂದರೆ "Discovery of India" ಮತ್ತು "Glimpses of World History". ನೆಹರು ಅವರ ಪ್ರಕಾರ ಇತಿಹಾಸವು ಮಾನವ ಸಮಾಜವು ಅನಾಗರಿಕತೆಯಿಂದ ನಾಗರಿಕತೆಯತ್ತ ಸಾಗಿದ ಕಥೆಯಾಗಿದೆ.


ಇತಿಹಾಸದ ವಿಭಾಗಗಳು

ಇತಿಹಾಸವನ್ನು ಅಧ್ಯಯನ ಮಾಡಲು ಕಾಲಾವಧಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಇತಿಹಾಸ ಪೂರ್ವಕಾಲ ಅಥವಾ Prehistory. ಈ ಕಾಲದಲ್ಲಿ ಬರವಣಿಗೆ ಇರಲಿಲ್ಲ. ಆದ್ದರಿಂದ ಈ ಕಾಲದ ಮಾಹಿತಿ ಕಲ್ಲಿನ ಉಪಕರಣಗಳು, ಮೂಳೆಗಳು ಮತ್ತು ಪುರಾತತ್ವ ಸಾಕ್ಷ್ಯಗಳಿಂದ ಮಾತ್ರ ದೊರೆಯುತ್ತದೆ. ಹಳೆ ಶಿಲಾಯುಗ, ಮಧ್ಯ ಶಿಲಾಯುಗ ಮತ್ತು ನವ ಶಿಲಾಯುಗಗಳು ಈ ವಿಭಾಗಕ್ಕೆ ಸೇರಿವೆ.


ಎರಡನೆಯದು ಇತಿಹಾಸ ಸಂಧ್ಯಾಕಾಲ ಅಥವಾ Proto History. ಈ ಕಾಲದಲ್ಲಿ ಕೆಲವು ದಾಖಲೆಗಳು ಇದ್ದರೂ ಅವುಗಳನ್ನು ಸಂಪೂರ್ಣವಾಗಿ ಓದಲು ಸಾಧ್ಯವಾಗಿಲ್ಲ. ಸಿಂಧೂ ಕಣಿವೆ ನಾಗರಿಕತೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅವರ ಲಿಪಿ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ.


ಮೂರನೆಯದು ಐತಿಹಾಸಿಕ ಕಾಲ ಅಥವಾ Historical Period. ಈ ಕಾಲದಲ್ಲಿ ಲಿಖಿತ ದಾಖಲೆಗಳು ಲಭ್ಯವಿದ್ದು, ರಾಜರು, ಯುದ್ಧಗಳು, ಆಡಳಿತ ಮತ್ತು ಸಮಾಜದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ. ವೇದಕಾಲ, ಮೌರ್ಯ ಸಾಮ್ರಾಜ್ಯ ಮತ್ತು ಗುಪ್ತ ಸಾಮ್ರಾಜ್ಯಗಳು ಈ ವಿಭಾಗಕ್ಕೆ ಸೇರಿವೆ.


ಇತಿಹಾಸವು ಕೇವಲ ಭೂತಕಾಲದ ಘಟನೆಗಳ ದಾಖಲೆಯಲ್ಲ. ಅದು ಮಾನವ ನಾಗರಿಕತೆಯ ಪಯಣದ ಕಥೆಯಾಗಿದೆ. ಇತಿಹಾಸದ ಅಧ್ಯಯನದ ಮೂಲಕ ನಾವು ನಮ್ಮ ಬೇರುಗಳನ್ನು ಅರಿಯುತ್ತೇವೆ, ಸಮಾಜದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಭವಿಷ್ಯಕ್ಕೆ ದಿಕ್ಕು ಕಂಡುಕೊಳ್ಳುತ್ತೇವೆ. ಆದ್ದರಿಂದ ಇತಿಹಾಸವನ್ನು ಓದುವುದು ಎಂದರೆ ಕೇವಲ ದಿನಾಂಕಗಳನ್ನು ನೆನಪಿಟ್ಟುಕೊಳ್ಳುವುದಲ್ಲ; ಮಾನವ ಸಮಾಜದ ವಿಕಾಸವನ್ನು ಅರ್ಥಮಾಡಿಕೊಳ್ಳುವುದಾಗಿದೆ.

ಕರ್ನಾಟಕದಲ್ಲಿ 1.11 ಕೋಟಿ ಮತದಾರರ ಹೆಸರು ಡಿಲೀಟ್ ಆಗಿದೆಯೇ? ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ 1.11 ಕೋಟಿ ಮತದಾರರ ಹೆಸರು ಡಿಲೀಟ್ ಆಗಿದೆಯೇ? ಸಂಪೂರ್ಣ ಮಾಹಿತಿ. ಕರ್ನಾಟಕದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ “1.11 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ...